Jun 23, 2021 | History | 0 comments

ಛಾಯಾಗ್ರಾಹಕ ಅಲ್ಲ, ಫೋಟೊ ಎಂಜಿನಿಯರ್

Art ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ’ ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ… Continue Reading...

Art

muntaq-1

ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ’ ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ ಎ.ಆರ್.ದತ್ತಾ ಸಂದರ್ಶನವೊಂದರಲ್ಲಿ `ನನ್ನ ಹತ್ತಿರ ಇರುವ ಆರು ಅಡಿ ಅಗಲದ ನೆಗೆಟಿವ್ ಅತ್ಯಂತ ದೊಡ್ಡದು’ ಎಂದು ತಿಳಿಸಿದ್ದರು. ಆದರೆ, ಮುಂತಾಕ್ ಬಳಿ ಅದಕ್ಕಿಂತ ಎರಡು ಅಡಿ ಹೆಚ್ಚು ಅಗಲವಾಗಿರುವ ನೆಗೆಟಿವ್ ಇದೆ. ಸಾಲಾಗಿ 400ಕ್ಕೂ ಹೆಚ್ಚು ಜನ ಕುಳಿತಾಗ ಕ್ಲಿಕ್ಕಿಸಿದ ಗ್ರೂಪ್ ಫೋಟೊ (ಸಮೂಹ ಚಿತ್ರ)ದಲ್ಲಿನ ಪ್ರತಿಯೊಬ್ಬರನ್ನೂ ನಿಚ್ಚಳವಾಗಿ ಕಾಣಿಸುವಂತೆ ಒಂದೇ ಕಾಲಕ್ಕೆ ಸೆರೆ ಹಿಡಿಯಬಲ್ಲರು ಮುಂತಾಕ್. ಆ ಚಿತ್ರದ ನೆಗೆಟಿವ್ನಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಛಾಯಾಚಿತ್ರ ಪ್ರಕಟಿಸಬಹುದು. ಸಮೂಹದಲ್ಲಿರುವ ಎಲ್ಲರ ಮುಖದ ಮೇಲಿನ ನೆರಿಗೆಗಳು, ಹಣೆಯ ಮೇಲಿನ ಬೆವರ ಹನಿಯನ್ನೂ ಈ ಕ್ಯಾಮರಾ ದಾಖಲಿಸುತ್ತದೆ.ಕೇವಲ ಇವಷ್ಟೇ ಅಲ್ಲ. ಅಂತಹ ಹತ್ತು ಹಲವು ವೈಶಿಷ್ಟ್ಯಗಳ ಆಗರ ಈ ಮುಂತಾಕ್. ಪರಸ್ಪರ ಮುಖಾಮುಖಿಯಾಗಿರುವ ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾ ಮತ್ತು ತಾಜಮಹಲ್ ಹೊಟೆಲ್‌ಗಳನ್ನು ಏಕಕಾಲಕ್ಕೆ ಒಂದೇ ನೆಗೆಟಿವ್ ಮೇಲೆ ಸೆರೆ ಹಿಡಿದಿರುವ ಕೌಶಲಿ.

ಅದು ಮತ್ತು ಅಂತಹ ಹಲವು ಕೌತುಕಮಯ ಛಾಯಾಗ್ರಹಣ ಮಾಡುವುದು ಸಾಧ್ಯವಾದದ್ದು ಮುಂತಾಕ್ ಬಳಿ ಇರುವ `ಮ್ಯಾಜಿಕ್ ಬಾಕ್ಸ್’ನಿಂದ. ಶತಮಾನದಷ್ಟು ಹಳೆಯದಾದ ಸಕ್ಯರ್ೂಟ್ ಕ್ಯಾಮರಾ ಅದು. ಅದನ್ನು ಟ್ರೈಪಾಡ್ ಸ್ಟ್ಯಾಂಡ್ ಮೇಲಿಟ್ಟು 180 ಡಿಗ್ರಿ ವರೆಗೆ ತಿರುಗಿಸಿ ಎದುರಿಗಿರುವ ವಸ್ತು-ವ್ಯಕ್ತಿಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಅದಕ್ಕಿದೆ. ಗುಜರಿವಸ್ತುಗಳನ್ನು ಮಾರಾಟ ಮಾಡುವ ಮುಂಬೈನ ಚೋರ್ ಬಜಾರ್‌ನಿಂದ ತಂದ ಕ್ಯಾಮರಾ ಅದು. ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ, ತೂಕಕ್ಕೆ ಹಾಕುವ ಬೆಲೆಯಲ್ಲಿ ತಂದ ಕ್ಯಾಮರಾಕ್ಕೆ ವಿವಿಧ ಲೆನ್ಸ್‌ಗಳನ್ನು ಹಾಕಿ `ಪ್ರಯೋಗ’ ನಡೆಸಿದರು. ಆಶ್ಚರ್ಯಕರ ರೀತಿಯಲ್ಲಿ ಕ್ಯಾಮರಾ ಕಾರ್ಯ ನಿರ್ವಹಿಸಲು ಆರಂಭಿಸಿತು.ಆಕ್ಸಫರ್ಡ್‌ ವಿಶ್ವವಿದ್ಯಾಲಯದಲ್ಲಿ ಗ್ರೂಪ್ ಫೋಟೊ ತೆಗೆಯುವುದಕ್ಕಾಗಿ ಬಳಸಲಾಗುತ್ತಿದ್ದ ಮಾದರಿಯ ಕ್ಯಾಮರಾ ಅದು. ನಿಷ್ಕ್ರಿಯ ಎಂದೇ ಭಾವಿಸಿ ಗುಜರಿಗೆ ಹಾಕಲಾಗಿತ್ತು. `ಏಕಕಾಲಕ್ಕೆ ನಾರ್ಮಲ್, ಟೆಲಿ ಮತ್ತು ವೈಡ್ ಲೆನ್ಸ್ ಆಗಿ ಬಳಸುವ ಅಪರೂಪದ ಲೆನ್ಸ್ ಉಪಯೋಗಕ್ಕೆ ಬರಬಹುದು ಎಂದು ಅಂದಾಜು ಮಾಡಿ `ಕ್ಯಾಮರಾ’ವನ್ನೇ ಕೇವಲ 1500 ರೂಪಾಯಿಗೆ ಖರೀದಿಸಿದೆ’ ಎನ್ನುತ್ತಾರೆ ಮುಂತಾಕ್. ಆಗ ಅವರಿಗೆ ಸುತ್ತಮುತ್ತ ತಿರುಗುವ ಸಾಮರ್ಥ್ಯ ಈ ಕ್ಯಾಮರಾಕ್ಕೆ ಇರಬಹುದು ಎಂದು ಗೊತ್ತಿರಲಿಲ್ಲ.ಮುಂಬೈನಿಂದ ಬೀದರ್‍ಗೆ ತಂದ ಮೇಲೆ ಮುಂತಾಕ್ ಕ್ಯಾಮರಾ ಜೊತೆ ಒಡನಾಟದಲ್ಲಿ ಹಲ ಹೊಸ ಅಂಶಗಳನ್ನು ಗುರುತಿಸಲು ಆರಂಭಿಸಿದರು. ಮತ್ತು ಅದರ ಜೊತೆ ಹಲವು ಪ್ರಯೋಗಗಳನ್ನೂ ನಡೆಸಿದರು. ಬೇರೆ ಬೇರೆ ಲೆನ್ಸ್ ಹಾಕಿ ಸಾಧ್ಯತೆಗಳನ್ನು ಪರೀಕ್ಷಿಸಿದರು. ಅವರೇ ಆಶ್ಚರ್ಯ ಪಡುವ ರೀತಿಯಲ್ಲಿ ಫಲಿತಾಂಶ ಬರಲಾರಂಭಿಸಿತು. ಈ ಕಾರಣಗಳಿಗಾಗಿಯೇ ಮುಂತಾಕ್ ಅವರನ್ನು ಕೇವಲ ಛಾಯಾಗ್ರಾಹಕ ಎಂದು ಗುರುತಿಸುವ ಬದಲು `ಫೋಟೊ- ಎಂಜಿನಿಯರ್’ ಎಂದು ಕರೆಯುವುದು ಸೂಕ್ತ. ಛಾಯಾಗ್ರಾಹಕನಾಗಿ ಬೀದರ್‌ನಲ್ಲಿ ಜನಪ್ರಿಯನಾಗಿದ್ದರೂ ತನ್ನ ಕ್ಯಾಮರಾ ಮೂಲಕ `ದೊಡ್ಡ ಗ್ರೂಪ್ ಫೋಟೊ’ ತೆಗೆಯಬಹುದು ಎಂದಾಗ ಬಹಳಷ್ಟು ನಂಬಲಿಲ್ಲ. ಕೊನೆಗೂ ಅವರು ಬೀದರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. 100 ಜನರ ಸಮೂಹವನ್ನು ಕ್ಲಿಕ್ಕಿಸಿದ ನಂತರ ಮುಂತಕಾ ಅವರಿಗೆ ತಮ್ಮ ಮೇಲೆಯೇ ಭರವಸೆ ಮೂಡಲು ಆರಂಭವಾಯಿತು. ನಂತರ ಕಾಲೇಜೊಂದರ 300 ವಿದ್ಯಾರ್ಥಿಗಳ ಗ್ರೂಪ್ ಫೋಟೊ ತೆಗೆದರು. ಮುಂತಾಕ ಅವರ ಸಾರ್ವಜನಿಕವಾಗಿ ತಮ್ಮ ಗ್ರೂಪ್ ಫೋಟೊ ಕೌಶಲ್ಯ ತೋರಿಸುವ ಅವಕಾಶ ಸಿಕ್ಕದ್ದು 1994ರಲ್ಲಿ. ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ೩೦೦ ಜನ ಶಾಸನ ಸಭೆಯ ಸದಸ್ಯರ ಚಿತ್ರ ಸೆರೆಹಿಡಿದರು. ಆ ಚಿತ್ರದಲ್ಲಿ ವಿಧಾನಸೌಧದ ಜೊತೆಗೆ ಹೈಕೋರ್ಟ್‌ ಕೂಡ ದಾಖಲಾಗಿದೆ.ಇಂತಹ ಅದ್ಭುತ ಕ್ಯಾಮರಾ ತನ್ನ ಸಂಗ್ರಹದಲ್ಲಿರಲಿ ಎಂದು ಮುಂಬೈನ ಛಾಯಾಗ್ರಹಣ ಮ್ಯೂಸಿಯಂ ಈ ಕ್ಯಾಮರಾಕ್ಕೆ ಎರಡು ಲಕ್ಷ ರೂಪಾಯಿ ಕೊಡಲು ಮುಂದೆ ಬಂದಿತ್ತು. ಆದರೆ, ಮುಂತಕಾ ಹಣಕ್ಕಾಗಿ ಅದನ್ನು ತನ್ನಿಂದ ಬೇರ್ಪಡಿಸಿಕೊಳ್ಳಲು ಸಿದ್ಧರಿಲ್ಲ. ಮುಂತಕಾ ಅವರ ಬಳಿ ಕೇವಲ ಅದೊಂದೇ ಕ್ಯಾಮರಾ ಇಲ್ಲ. ಅತ್ಯಂತ ಹಳೆಯ ಕ್ಯಾಮರಾಗಳಿಂದ ಹಿಡಿದು ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳು ಅವರ ಸಂಗ್ರಹದಲ್ಲಿವೆ.ವಿವಿಧ ಕಂಪೆನಿಗಳಿಂದ ಬೇರೆ ಬೇರೆ ಕಾಲದಲ್ಲಿ ತಯಾರಾದ 100ಕ್ಕೂ ಹೆಚ್ಚು ಕ್ಯಾಮರಾಗಳನ್ನು ಮುಂತಾಕ್ ಖರೀದಿಸಿದ್ದಾರೆ.

ಒಂದು ಕ್ಯಾಮರಾದ ಬಿಡಿಭಾಗ ಮತ್ತೊಂದಕ್ಕೆ ಹಾಕುವುದು ಹಾಗೂ ಒಂದರ ಲೆನ್ಸ್ ಮತ್ತೊಂದಕ್ಕೆ ಹಾಕಿ `ಪ್ರಯೋಗ’ ಮಾಡುವ ಹವ್ಯಾಸ ಅವರದು. ಆ ಎಲ್ಲ ಕ್ಯಾಮರಾಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ನೋಡುವುದೇ ಕಷ್ಟ. ಮುಂತಕಾ ಅವರ ತಂದೆ ನಿಜಾಂರ ಕಾಲದಲ್ಲಿ ಪೊಲೀಸ್ ಫೋಟೊಗ್ರಾಫರ್ ಆಗಿದ್ದರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದುವರೆಸಿದ ಮುಂತಕಾ ಅವರು ಅದನ್ನು ಬೆಳೆಸಿದರು. ಅವರ ಸಂಗ್ರಹದಲ್ಲಿರುವ ಅಪರೂಪದ ನೆಗೆಟಿವ್ ಮತ್ತು ಫೋಟೊಗಳನ್ನು ನೋಡುವುದೇ ಮೈ ನವಿರೇಳಿಸುವ ಅನುಭವ. ಗಾಜಿನ ಮೇಲೆ ಸಿಲ್ವರ್ ನೈಟ್ರೇಟ್ ಲೇಪಿಸಿ ಮಾಡಲಾದ ನೆಗೆಟಿವ್‌ಗಳೂ ಅವರ ಸಂಗ್ರಹದಲ್ಲಿವೆ. ಬಹುತೇಕ ಎಲ್ಲ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳ ಛಾಯಾಚಿತ್ರಗಳನ್ನು ಮುಂತಾಕ್ ಸೆರೆ ಹಿಡಿದಿದ್ದಾರೆ. ಬೀದರ್ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ನೆಹರೂ ಚಿತ್ರ ಮುಂತಕಾ ಅವರ ಅತ್ಯಂತ ಮೆಚ್ಚಿನ ಫೋಟೊ. ಹಾಗೆಯೇ ಲಾತೂರನಲ್ಲಿ ಸಂಭವಿಸಿದ ಭೂಕಂಪದ ಛಾಯಾಚಿತ್ರಗಳು ಮತ್ತು ತಡೋಳದ ಹತ್ತಿರ ನಡೆದ ಬೆಂಕಿ ದುರಂತದ ಚಿತ್ರಗಳು ಕರುಳು ಕಿವುಚುವಂತಿವೆ. ಹಾಗೆಯೇ ಬೀದರನ ಐತಿಹಾಸಿಕ ಸ್ಮಾರಕಗಳನ್ನು ಮುಂತಾಕ್ ಸೆರೆ ಹಿಡಿದಿರುವ ರೀತಿಯೇ ಅನನ್ಯ. `ಒಂದು ಕಾಲಕ್ಕೆ ಮನಸ್ಸು ಮಾಡಿದ್ದರೆ ಮುಂಬೈ ಅಥವಾ ಹೈದಾರಾಬಾದ್‌ಗೆ ಹೋಗಿ ನೆಲೆಸಬಹುದಿತ್ತು. ಆದರೆ, ಬೀದರ್ ಮೇಲಿನ ಪ್ರೀತಿ ಮತ್ತು ಈ ನೆಲದ ಮೇಲಿನ ಅಭಿಮಾನ ನನ್ನನ್ನು ಹೊರಗೆ ಹೋಗಲು ಬಿಡಲಿಲ್ಲ. ಎಲ್ಲಿಗೆ ಹೋದರು ಎರಡ್ಮೂರು ದಿನದಲ್ಲಿ ಬೀದರ್‌ಗೆ ಮರಳುತ್ತೇನೆ’ ಎನ್ನುತ್ತಾರೆ ಮುಂತಕಾ. ಅವರ ಸಹೋದರ ಮತ್ತು ಕುಟುಂಬದ ಸದಸ್ಯರೆಲ್ಲ ವಿದೇಶದಲ್ಲಿದ್ದಾರೆ ಒಬ್ಬಂಟಿಯಾಗಿ ವಾಸಿಸುವ ಅವರ ಜೊತೆಗಾರ ಎಂದರೆ ಕ್ಯಾಮರಾ ಮತ್ತು ಅವುಗಳ ಲೆನ್ಸ್‌ಗಳು. 70 ವಸಂತಗಳನ್ನು ಪೂರೈಸ್ದಿದರೂ ಕ್ಯಾಮರಾಬ್ಯಾಗ್ ಹೆಗಲಮೇಲೆ ಹಾಕಿಕೊಂಡು ಸೈಕಲ್ ಮೇಲೆ ಸಂಚರಿಸುತ್ತ ಚಿತ್ರ ಕ್ಲಿಕ್ಕಿಸುವ ಹವ್ಯಾಸ ಕೈ ಬಿಟ್ಟಿಲ್ಲ. ಸಂಕೋಚ ಸ್ವಭಾವದ ಮುಂತಕಾ ಅವರು ಸದಾ ಎಲೆ ಮರೆಯ ಕಾಯಿಯಂತೆಯೇ ಉಳಿಯಬಯಸುತ್ತಾರೆ. ಅವರು ತಮ್ಮ ಬಗ್ಗೆ ಮತ್ತು ತಮ್ಮ ಬಳಿ ಇರುವ ಕ್ಯಾಮರಾಗಳ ಕುರಿತು ಮಾತನಾಡುವುದೇ ಅಪರೂಪ. ಅಂತಹ ಮುಂತಕಾ ಅವರಿಗೆ ಆಶ್ಚರ್ಯಕರ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿದೆ.

– Devu Pattar

Related Articles

Related

Rangeen Mahal

Rangeen Mahal

Art A colourful palace in Bidar fort’s vicinity A riot of colours. Albeit faded because of the passage of time. That's what Rangeen Mahal in Bidar’s fort is all about. The Rangeen Mahal is not a well-known place, but just enter the premises and you will be in for a...

Bidar’s karez system can qualify as UNESCO heritage structure

The ‘karez’ water system (subterranean aqueduct) in Bidar is unique not only by Indian standards, but also by global standards. Its design, purpose, and social and cultural implications make it remarkable, M.L. Khaneiki, groundwater expert from UNESCO’s International...

0 Comments

Leave a Reply